Bengaluru
9900032019, 9481317437
namobharath2.0@gmail.com

ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು?

Mission 365 Plus

ಭಾರತದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿ ಯವರ ಕನಸಿನ ಯೋಜನೆಗಳಲ್ಲಿ ಒಂದು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ. ಈ ಯೋಜನೆಯು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಇಲಾಖೆ ಯ ಅಡಿಯಲ್ಲಿ ಬರುತ್ತದೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮೊದಲು ಶ್ರೀ ರಾಜೀವ್ ಪ್ರತಾಪ್ ರೂಢಿಯವರು ಈ ಇಲಾಖೆಯ ಮಂತ್ರಿಗಳಾಗಿದ್ದರು, ನಂತರದಲ್ಲಿ ನಮ್ಮ ಉತ್ತರ ಕನ್ನಡ ಜಿಲ್ಲೆಯ ಸಂಸದರಾದ ಶ್ರೀ ಅನಂತ ಕುಮಾರ ಹೆಗಡೆಯವರು ಈ ಖಾತೆಯ ಮಂತ್ರಿಗಳಾಗಿದ್ದಾರೆ(ರಾಜ್ಯ ದರ್ಜೆ).

ಭಾರತವು ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ಯುಕರನ್ನು ಹೊಂದಿರುವ ದೇಶ. ಪ್ರತಿ ತಿಂಗಳು ಹತ್ತು ಲಕ್ಷ ಜನರು ಉದ್ಯೋಗ ಲೋಕಕ್ಕೆ ಕಾಲಿಡುತ್ತಾರೆ. 2022 ರ ಒಳಗೆ 40 ಕೋಟಿ ಯುವಕರಲ್ಲಿ ಕೌಶಲ್ಯವನ್ನು ಹೆಚ್ಚಿಸಿ ಅವರು ಸ್ವಂತ ದುಡಿಮೆಯ ಮೂಲಕ ತಮ್ಮ ಜೀವನವನ್ನು ಕಟ್ಟಿಕೊಳ್ಳುವ ಹಾಗೆ ಮಾಡುವುದು ಮತ್ತು ಅವರ ಜೀವನಮಟ್ಟ ಸುಧಾರಿಸುವುದು ಇದರ ಮೂಲ ಉದ್ದೇಶ. ಈ ಯೋಜನೆಯಲ್ಲಿ ನೀಡುವ ತರಬೇತಿಯ ಸಂಪೂರ್ಣ ಖರ್ಚನ್ನು ಕೇಂದ್ರ ಸರ್ಕಾರವೇ ಬರಿಸಲಿದೆ.

ಈಗಾಗಲೇ ದೇಶದಲ್ಲಿ 187 ಸಂಸ್ಥೆಗಳು ತರಬೇತಿ ನೀಡಲು ಸರ್ಕಾರದ ಜೊತೆ ಕೈಜೋಡಿಸಿ 2300 ತರಬೇತಿ ಕೇಂದ್ರಗಳನ್ನು ದೇಶದ ಎಲ್ಲಾ ನಗರಗಳಲ್ಲೂ ತೆರೆದಿವೆ. ಮುಖ್ಯವಾಗಿ ಎರಡನೇ ಮತ್ತು ಮೂರನೇ ಸ್ತರದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಈ ಯೋಜನೆಯನ್ನು ವಿಸ್ತರಿಸಿಲಾಗುತ್ತಿದೆ. ಈ ಯೋಜನೆಗೆ ಹತ್ತನೇ ತರಗತಿ ಮತ್ತು ಪಿಯುಸಿ ಮುಗಿಸಿದವರೂ ಅಥವಾ ಅನುತ್ತೀರ್ಣರಾದವರು ಸಹ ಉಚಿತವಾಗಿ ಸೇರಿಕೊಳ್ಳಬಹುದು. ಈ ಯೋಜನೆಯಲ್ಲಿ ಒಟ್ಟು 400 ಕ್ಕೂ ಅಧಿಕ ರೀತಿಯ ತರಬೇತಿಗಳಿದ್ದು ಇಷ್ಟವಾಗುವ ಯಾವ ತರಬೇತಿಯನ್ನಾದರೂ ಆರಿಸಿಕೊಳ್ಳಬಹುದು.

ದೇಶದಲ್ಲಿ ಹೊಸದಾಗಿ ತಲೆಎತ್ತಿರುವ ಈ ಸುಸಜ್ಜಿತ ತರಬೇತಿ ಕೇಂದ್ರಗಳಲ್ಲಿ ಹಲವು ಬಗೆಯ ಸೌಲಭ್ಯಗಳಿವೆ. ಉತ್ಪಾದನೆ ಸಂಬಂಧಿತ ಕಲಿಕೆ, ಸ್ಮಾರ್ಟ್ ಲ್ಯಾಬ್, ಉದ್ಯೋಗ ಮಾಹಿತಿ ಸೇರಿದಂತೆ ಎಲ್ಲಾ ಸೌಕರ್ಯಗಳಿವೆ. ಪಠ್ಯದಲ್ಲಿ ಬದಲಾವಣೆ, ಪರೀಕ್ಷೆಗಳ ವಿಧಾನ ಮತ್ತು ಮೌಲ್ಯಮಾಪನೆಯಲ್ಲಿ ಮಹತ್ತರ ಬದಲಾವಣೆಗಳ ಮೂಲಕ ತರಬೇತಿಯ ಮೌಲ್ಯವನ್ನು ಹೆಚ್ಚಿಸಲಾಗಿದೆ.

ಉತ್ತಮ ಕೌಶಲ ಹೊಂದಿದ ಅಭ್ಯರ್ಥಿಗಳಿಗೆ ₹ 8000 ರೂಗಳನ್ನು ವಿಶೇಷ ಬಹುಮಾನದ ರೀತಿಯಲ್ಲಿ ನೀಡಲಾಗುತ್ತದೆ. ಈಗಾಗಲೇ 30 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳಿಗೆ ₹ 1500 ಕೋಟಿ ವೆಚ್ಚದಲ್ಲಿ ತರಬೇತಿ ನೀಡಲಾಗಿದೆ.

2018 ರ ಅವಧಿಯಲ್ಲಿ ದೇಶದಲ್ಲಿ 3,356 ಹೊಸ ITI ಕಾಲೇಜುಗಳ ಸ್ಥಾಪನೆಯಾಗಿದ್ದು, ದೇಶದಲ್ಲಿ ಈಗ ಒಟ್ಟು 14,254 ಕಾಲೇಜುಗಳಿವೆ. ಇದರಲ್ಲಿ ಒಟ್ಟು 30.57 ಲಕ್ಷ ವಿದ್ಯಾರ್ಥಿಗಳಿಗೆ ಕಲಿಕಾ ಅವಕಾಶವಿದ್ದು, ಈ ಯೋಜನೆಯು ಅವರಿಗೆ ಉದ್ಯೋಗ ದೊರಕಿಸಿಕೊಡಲು ಸಹಕಾರಿಯಾಗಿದೆ. ಸರ್ಕಾರದ ಈ ಯೋಜನೆಗೆ ಜೆಕೆ ಸಿಮೆಂಟ್, ಜಿಂದಾಲ್ ಪೈಪ್ಸ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಎನ್.ಎ.ಎಲ್.ಸಿ.ಓ, ಎನ್.ಟಿ.ಪಿ.ಸಿ ಸೇರಿದಂತೆ ಇತರೆ ದಿಗ್ಗಜ ಕಂಪನಿಗಳು ಕೈಜೋಡಿಸಿವೆ. ಇದರ ಜೊತೆಗೆ ಕೇಂದ್ರ ಸರ್ಕಾರದ ಹಲವು ಇಲಾಖೆಗಳ ಮಹತ್ವದ ಯೋಜನೆಗಳಾದ ಸೌಭಾಗ್ಯ ಯೋಜನೆ, ಊರ್ಜಾ ಗಂಗಾ, ಸ್ವರ್ಣಾ ಯೋಜನೆಳಿಗೆ ಸ್ಕಿಲ್ ಇಂಡಿಯಾ ಸಹಕಾರಿಯಾಗಿದೆ.

ಸ್ಕಿಲ್ ಆನ್ ವೀಲ್ಹ್ಸ್ ಎನ್ನುವ ವಿಶೇಷ ಕಾರ್ಯಕ್ರಮವನ್ನು ಶ್ರೀ ಅನಂತ ಕುಮಾರ ಹೆಗಡೆಯವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿತ್ತು. ಕೌಶಲ ಅಭಿವೃದ್ಧಿ ಯೋಜನೆಯನ್ನು ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡುಹೋಗುವ ಉದ್ದೇಶದಿಂದ ಕರ್ನಾಟಕದ ಎಂಟು ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆದಿದೆ. 2018ರ ಮಾರ್ಚ್ ವೇಳೆಗೆ ಒಟ್ಟು 2,57,000 ಯುವಕರನ್ನು ಈ ಕಾರ್ಯಕ್ರಮ ತಲುಪಿದೆ. 30 ಜಿಲ್ಲೆಯ 370 ಕಾಲೇಜುಗಳ 67,000 ವಿದ್ಯಾರ್ಥಿಗಳು ಯೋಜನೆ ಜೊತೆಗೆ ನೊಂದಾಯಿಸಿಕೊಂಡಿದ್ದಾರೆ.

ವಿದೇಶಗಳಲ್ಲಿ ಯುವಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಅಲ್ಲಿನ ಸರ್ಕಾರಗಳಿಗೆ ಈ ಹುದ್ದೆಗಳನ್ನು ತುಂಬುವುದು ಕಷ್ಟವಾಗುತ್ತಿದೆ. ಭಾರತದಲ್ಲಿನ ಮಾನವ ಸಂಪನ್ಮೂಲಕ್ಕೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈ ಕಾರಣದಿಂದ ನಮ್ಮ ದೇಶದ ಯುವಕರಲ್ಲಿ ಉತ್ತಮ ಕೌಶಲತೆಯನ್ನು ತುಂಬಿ ಅವರನ್ನು ವಿದೇಶಕ್ಕೆ ಕಳಿಸಿಕೊಡುವುದಕ್ಕೆ ವಿಶೇಷವಾಗಿ Indian International Skill Center (IISC)ಎನ್ನುವ 16 ಕೇಂದ್ರಗಳನ್ನು ದೇಶಾದ್ಯಂತ ತೆರೆಯಲಾಗಿದೆ. ಇದರಲ್ಲಿ ಇದುವರೆಗೂ 19 ಬ್ಯಾಚ್ ಗಳ ತರಬೇತಿ ನಡೆದಿದ್ದು, ಇದರಲ್ಲಿ ಶೇ 55% ರಷ್ಟು ಜನ ಉತ್ತೀರ್ಣರಾಗಿದ್ದಾರೆ.

2016 ರಿಂದ 2018 ರವರೆಗೂ ಒಟ್ಟು 30,66,472 ಜನ ಈ ಯೋಜನೆಗೆ ನೋಂದಾಯಿಸಿದ್ದು ಇದರಲ್ಲಿ 18,89,803 ಜನರು ತರಬೇತಿಯಲ್ಲಿ ಉತ್ತೀರ್ಣರಾಗಿದ್ದು, 8,23,674 ಜನರು ಉದ್ಯೋಗ ಪಡೆದುಕೊಂಡಿದ್ದಾರೆ ಮತ್ತು ಇತರರು ಸ್ವಂತ ಉದ್ಯಮ ನಡೆಸುತ್ತಿದ್ದಾರೆ. 2016 ರಿಂದ 2020 ರ ಅವಧಿಗೆ ಈ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಕೇಂದ್ರ ಸರ್ಕಾರವೂ 12,000 ಕೋಟಿ ರೂಪಾಯಿಯನ್ನು ಮೀಸಲಿಟ್ಟಿದೆ.
ಹೆಚ್ಚಿನ ಮಾಹಿತಿಗೆ ಭೆಟಿ ನೀಡಿ

www.pmkvyofficial.org
www.made.gov.in

 

ಸಿದ್ದಲಿಂಗ ಸ್ವಾಮಿ
ನಮೋ ಭಾರತ ತಂಡ